ಅವನು ವ್ಯಸನವನ್ನು ಆಳ್ವಿಕೆಗೆ ಒಳಪಡಿಸಿಕೊಂಡು ತನ್ನ ಅಧೀನದಲ್ಲಿ ಇರಿಸಿಕೊಂಡಿದ್ದ. ಆಳುವ ರಾಜನಾಗಿ ಕ್ಷಾಮ ಬರದಂತೆ ಎಚ್ಚರ ವಹಿಸುವುದು ಅವನ ಕರ್ತವ್ಯದ ವಿಧಿಗಳಲ್ಲೊಂದಾಗಿತ್ತು. ಅಂತೆಯೇ ನಿರ್ವಹಣೆ ಮಾಡುತ್ತಲಿದ್ದ, ಮಾಡಲೇಬೇಕಿತ್ತು. ಗಂಡಸರೇ ಹೀಗೆ ಹಲಸಿನ ಹಣ್ಣಿನ ತರಹದ ವ್ಯಕ್ತಿತ್ವದವರು. ಹೊರಗೆ ನೋಡಿದರೆ ಬಲು ಒರಟು ಸ್ವಭಾವ, ಅಂತರಾಳಕ್ಕಿಳಿದಾಗ ಮಾತ್ರ ಅವರ ಸಿಹಿ ಗೊತ್ತಾಗೋದು, ಅವರ ಸತ್ವ ಹಿಡಿತ ಕಾರ್ಯದ ಪರಿಚಯವಾಗೋದು.
ಅವಳು ಪತಿಯ ಮೇಲೆ ನಿಗಾವಹಿಸುವ ಅದೆಲ್ಲ ಯೋಜನೆ ಹೂಡಿದ್ದರೂ ವಿಫಲ ಯತ್ನ ನಡೆಯುತ್ತಲಿತ್ತು. ಗಂಡಸರೋ ಅದೇನೋ ತಿಂದು ಅದ್ಯಾರದೋ ಬಾಯಿಗೆ ಒರೆಸುವ ಕಿಲಾಡಿಗಳು. ಹೆಂಗಸರೇನೂ ಕಡಿಮೆಯಿಲ್ಲ ಬಿಡಿ, ಚಾಪೆಯ ಕೆಳಗೆ ನುಸುಳಿದರೆ ಇವರು ರಂಗೋಲಿ ಕೆಳಗೆ ನುಸುಳುವ ಚಾಲಾಕಿಗಳು.
ಅವಳು ಪಡುತ್ತಿದ್ದ ಸಂಶಯ ನಿಜ ಎಂದು ಅವಳಿಗೂ ತಿಳಿದಿತ್ತು. ಆದರೆ ಏನು ಮಾಡುತ್ತಾಳೆ? ಯಾವುದೇ ಸಾಕ್ಷ್ಯಾಧಾರ ಇಲ್ಲದೇ ಎಲ್ಲೂ ಏನೂ ನಡೆಯುವುದಿಲ್ಲ ಎಂಬ ಅರಿವು ಅವಳಿಗಿಲ್ಲವೇ? ಸರಿಯಾದ ಸಮಯಕ್ಕಾಗಿ ಇತ್ತ ಇವಳು ಕಾಯುತ್ತಲಿದ್ದಳು.
ಇವನು ಮಧ್ಯ ಸೇವಿಸಿ ಸಿಗರೇಟ್ ಹಚ್ಚಿ ಸ್ನೇಹಿತರ ಜೊತೆಗೂಡಿ ಪಾರ್ಟಿ ಮಾಡುತ್ತಿದ್ದ. ಅವತ್ತು ಸ್ವಲ್ಪ ಮಟ್ಟಿಗೆ ಹೇಳುವುದಾದರೆ ಅತಿಯಾಗೇ ತಿಂದುಂಡು ತೇಗಿದರು. ಇವರ ಆಟಾಟೋಪ ಅತಿಯಾದರೂ ಬಾರ್ ಮಾಲೀಕ ಸಹಿಸಿಕೊಂಡು ನೋಡುತ್ತಲಿದ್ದ. ಯಾಕೆಂದರೆ ಖಾಯಂ ಗಿರಾಕಿಗಳು ಇವರು. ಅವನಿಗೂ ಬೇರೆ ದಾರಿಯಿರಲಿಲ್ಲ.
ಎಲ್ಲ ಮುಗಿಸಿ ಎದ್ದು ಹೊರಡಬೇಕೆಂದಾಗ ಯುವಕನೊಬ್ಬ ಬಂದು ಇವರಿಗೆ ಗುದ್ದಿಕೊಂಡ. ಯುವಕನನ್ನು ಅಡ್ಡಗಟ್ಟಿ ನಿಂತರು. ಅವನು ಕ್ಷಮೆಯಾಚಿಸಿ ಬಿಡಿ ಎಂದು ಅಂಗಲಾಚಿದ. ಆದರೆ ಇವರು ಮತ್ತಿನಲ್ಲಿದ್ದವರು ಹಾಸ್ಯದ ಕಿಕ್ ಬೇಕೆಂದು ಅವನನ್ನು ಸತಾಯಿಸಿದರು.
ಅವನೂ ಸಹನೆ ಮೀರಿ ಕೈ ಮಾಡಿದ. ಕೇಳಬೇಕೇ ಇನ್ನಿವರ ರೋಷವನ್ನು!? ಜಗಳ ಅತಿರೇಕಕ್ಕೇರಿತು. ಸೆಕ್ಯೂರಿಟಿ ಬಂದು ಜಗಳವನ್ನು ನಿಲ್ಲಿಸಿ ವಾರ್ನ್ ಮಾಡಿದ. ಸೆಕ್ಯೂರಿಟಿಗೆ ಇತ್ತ ಮಾಲೀಕನಿಂದಲೂ ಬೆಂಬಲ ಸಿಕ್ಕಿತು.
ಆವೇಗ ಮತ್ತು ಅವೇಷದಿಂದ ಯುವಕ ಪಲಾಯನ ಮಾಡಿದ. ಇವರುಗಳು ಅದೇ ವಿಷಯದ ಬಗ್ಗೆ ಮಾತನಾಡಿ ತಮ್ಮದೇನೂ ತಪ್ಪಿಲ್ಲ ಎಂದು ತಾವುಗಳೇ ಸಮಾಧಾನಪಡಿಸಿಕೊಂಡು ಅಲ್ಲಿಂದ ಕಾಲ್ಕಿತ್ತರು.
ಮನೆಗೆ ಬರುವಾಗ ರಾತ್ರಿಯಾಗಿತ್ತು. ಎಲ್ಲೆಡೆ ಅಂಧಕಾರ, ಸುತ್ತ ನಿಶ್ಯಬ್ದ. ಸಾವಿನ ಸುಳಿವು ಸಿಕ್ಕಂತೆ ಮನದಲ್ಲೇನೋ ಚಡಪಡಿಕೆ. ಯಾರೋ ಹಿಂಬಾಲಿಸಿ ತನ್ನನ್ನು ಭಯಕ್ಕೊಳಪಡಿಸುತ್ತಾ ಇದ್ದಾರೇನೋ ಎಂಬ ಮಿಥ್ಯ ಭಾವನೆ.
ಹೀಗೆಲ್ಲ ಆಗುವುದು ಸಹಜ ಬಿಡಿ, ಅದರಲ್ಲೂ ಈ ವ್ಯಸನಿಗಳಿಗೆ ಆಗೋದು ಮಾಮೂಲಿ.
ಮೊದಲೇ ಹತ್ತು ಹಲವರು ವ್ಯಸನದ ಬದುಕಿಗೆ ಆಗುವ ಅನಾಹುತಗಳ ಪಟ್ಟಿ ಮಾಡಿ ಅದನ್ನು ಒತ್ತಿ ಒತ್ತಿ ಹೇಳಿರುತ್ತಾರೆ.
ಮೊದಲಿಗೆ ಇವರಲ್ಲಿ ಅಂತಹ ಅದ್ಯಾವುದೇ ಭಾವನೆ ಇಲ್ಲದಿದ್ದರೂ ಇವರುಗಳ ಮಾತುಗಳಿಂದ ಪ್ರಭಾವಿತರಾಗಿಬಿಡುತ್ತಾರೆ.
ಮನಸ್ಸಿನ ಅದ್ಯಾವುದೋ ಮೂಲೆಯಲ್ಲಿ ಇವುಗಳನ್ನೆಲ್ಲ ಸಂಗ್ರಹಿಸಿ ವ್ಯಸನಿಗಳಾಗುವ ಪ್ರತಿಯೊಮ್ಮೆ ನೆನಪಿಸಿಕೊಂಡು ಅಂಜುತ್ತಾರೆ.
ಇದೇ ಕೊನೆಯಬಾರಿ ಎಂದು ತಮಗೆ ತಾವೇ ಸಮಾಧಾನ ತರುವ ಮಾತುಗಳನ್ನಾಡಿಕೊಂಡು ಸುಮ್ಮನಾಗಿಬಿಡುತ್ತಾರೆ.
ಮತ್ತೊಮ್ಮೆ ಇದೇ ರೀತಿ. ಅದೇ ರಾಗ ಅದೇ ಹಾಡು.
ಇವನು ಮನೆಗೆ ಬಂದ. ಬಾಗಿಲು ಇವನಿಗಾಗೇ ತೆರೆದಂತಿತ್ತು. ಸದ್ದು ಮಾಡದೇ ಸುಮ್ಮನೆ ಹೋಗಿ ಮಲಗಿದ.