ನಿಗೂಢ ಸ್ವಾದ
ಅಮರ್ ಸೀದಾ ಸಾದಾ ಮನುಷ್ಯ. ನೋಡಿದರೆ ಗೊತ್ತಾಗುತ್ತೆ ಈತ ಸಾಧುಪ್ರಾಣಿ ಎಂದು. ಅಮರ್ ಮನೆಗೆ ರಾಮಣ್ಣ ಬರುತ್ತಾರೆ. ಅಮರ್ ಒಬ್ಬ ಬ್ರಹ್ಮಚಾರಿ, ಮದುವೆಯ ವಯಸ್ಸು ಮೀರಿ ಹೋದರೂ ಅವನಿಗೆ ಆ ಬಗೆಗಿನ ಕಿಂಚಿತ್ತೂ ಅನ್ವಯಿಸದಂತೆ ಸುಮ್ಮನಿದ್ದಾನೆ.ಮನೆಯ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಹರಡಿ ಹೋಗಿತ್ತು.ತಿಂದ ತಟ್ಟೆಯನ್ನೂ ತೊಳೆದಿರಲಿಲ್ಲ.ಹೇಳಬೇಕೆಂದರೆ, ಬ್ರಹ್ಮಚಾರಿ ಎಂಬುದನ್ನೇ ಈ ವಸ್ತುಗಳು ಬಿಂಬಿಸುತ್ತಿದ್ದವು. ಅಮರ್ ಟಿವಿ ನೋಡುತ್ತಾ ಮನೆಯಲ್ಲಿ ಕುರ್ಚಿಯ ಮೇಲೆ ಕೂತಿದ್ದ.ರಾಮಣ್ಣ ಬಂದಿದ್ದನ್ನು ನೋಡಿ ಒಮ್ಮೆಲೆ ಗ್ರಹಿಸಲಾಗದಿದ್ದರೂ , ಬನ್ನಿ ಸರ್ ಎಂದು ಕುರ್ಚಿಯನ್ನು ತಾನು ಹೆಗಲ ಮೇಲೆ ಹಾಕಿಕೊಂಡ ಟವೆಲ್ ನಿಂದ ಹೊಡೆಯುತ್ತಾ ಕುರ್ಚಿಯನ್ನು ಮುಂದೆ ತಳ್ಳಿದ.ಅವರ ಮುಂದೆ ಕೈ ಕಟ್ಟಿಕೊಂಡು ನಿಂತುಕೊಂಡ.ಆದರೆ ರಾಮಣ್ಣ ಕೂತು ಮಾತನಾಡುವ ಯೋಜನೆಯಲ್ಲಿರಲಿಲ್ಲ.ಆದರೂ ಇವನ ಆದರ ಆತಿಥ್ಯ ನೋಡಿ ಕ್ಷಣಕಾಲ ಕುಳಿತುಬಿಡೋಣ ಎಂದೆನಿಸಿತೋ ಏನೋ.ಸರ್ ಚಹಾ ಮಾಡ್ತೀನಿ ಎಂದು ಅತ್ತ ಇತ್ತ ಏನೋ ಹುಡುಕಿದವನಂತೆ ಅಮರ್ ತಡಕಾಡಿದ.ಅವೆಲ್ಲ ಏನೂ ಬೇಡ ಬಿಡಿ ಎಂದು ರಾಮಣ್ಣ ಹೇಳಿದರು.ಅವನ ಮನೆಯ ಆಕಾರ ವಿಕಾರವನ್ನು ನೋಡಿಯೋ ಅಥವಾ ಇವನಿಗೇಕೆ ತೊಂದರೆ ಕೊಡ್ಬೇಕು ಎಂದೋ ಗೊತ್ತಿಲ್ಲ.ನೇರವಾಗಿ ವಿಷಯಕ್ಕೆ ಬಂದರು. ನಿನ್ನೆ ರಾತ್ರಿ ಡ್ರೀಮ್ ವರ್ಲ್ಡ್ ಬಾರ್ ಹತ್ತಿರದಲ್ಲಿಯೇ ಕೊಲೆಯ ವಿಷಯವಾಗಿ ನಿನ್ನನ್ನು ನಮ್ಮ ನವೀನ್ ಸರ್, ಅದೇ ನಮ್ಮ ಇನ್ಸ್ಪೆಕ್ಟರ್ ಕರೀತವ್ರೆ ನಡೆಯಿರಿ ಜೀಪ್ ಹತ್ತಿ ಎಂದು ರಾಮಣ್ಣ ನೇರಾನೇರ ವಿಷಯದ ಪ್ರಸ್ತಾವನೆ ಮುಂದಿಟ್ಟರು.
ಅಮರ್ ಮುಖದಲ್ಲಿ ಕೊಂಚಮಟ್ಟಿಗೆ ವಿಭಿನ್ನ ಎನಿಸಿದರೂ ಅವನು ಮುಂದುವರಿದು ನುಡಿದ, ಆದರೆ ಸರ್ ಆ ಕೊಲೆ ನಡೆಯೋದಕ್ಕೂ ನೀವು ನನ್ನನ್ನು ಪೋಲಿಸ್ ಠಾಣೆಗೆ ಕರ್ಯೋದಕ್ಕೂ ಏನು ಸಂಬಂಧ!?. ರಾಮಣ್ಣನಿಗೆ ಕ್ಷಣಿಕ ದುಗುಡ ತುಂಬಿ ಹೋಯಿತು.ಸುಧಾರಿಸಿಕೊಂಡ ರಾಮಣ್ಣ ಅಲ್ಲಯ್ಯಾ ನಿನ್ನೆ ರಾತ್ರಿ ನೀನೇ ಕಾಲ್ ಮಾಡಿ ನಮ್ಮ ಪೋಲಿಸ್ ಠಾಣೆಗೆ ವಿಷಯ ತಿಳಿಸಿದ್ದೀಯಾ.ಈಗ ನೋಡಿದ್ರೆ ನನಗೇನು ಸಂಬಂಧ ಅಂತ ಕೇಳ್ತಾ ಇದೀಯಾ!? ಎಂದು ಕೇಳಿದ.ಅಮರ್ ಮುಖದಲ್ಲಿ ಅದ್ಯಾವುದೇ ವ್ಯತ್ಯಾಸ ಕಾಣುತ್ತಿರಲಿಲ್ಲ.ಅವನು ಸಹಜವಾಗಿಯೇ, ನಾನು ನಿಮ್ಮ ಪೋಲಿಸ್ ಠಾಣೆಗೆ ಕಂಪ್ಲೇಂಟ್ ಕೊಟ್ಟೊದೀನಾ ? ಇಲ್ಲ ಸರ್ ನೀವೇನೋ ದ್ವಂದ್ವದಲ್ಲಿ ನಾನು ಅಂದುಕೊಂಡಿದೀರಾ.ದಯವಿಟ್ಟು ಮತ್ತೊಮ್ಮೆ ಚೆಕ್ ಮಾಡಿ ನೋಡಿ.ಬಹುಶಃ ನೀವ್ಯಾರನ್ನೋ ಭೇಟಿಯಾಗಲು ಹೊರಟವರು ತಪ್ಪಾಗಿ ಇಲ್ಲಿಗೆ ಬಂದಿರಬೇಕು ಎಂದ.ರಾಮಣ್ಣ ಇದೇನೋ ನಿಗೂಢ ವಾತಾವರಣ ಸೃಷ್ಟಿಯಾದ ಹಾಗಿದೆ ಎಂದುಕೊಂಡು, ನೀನದೇನೇ ಹೇಳೋದಿದ್ದರೂ ನಮ್ಮ ಪೋಲಿಸ್ ಠಾಣೆಗೆ ಬಂದು ಸಾಹೇಬ್ರ ಮುಂದೆ ಹೇಳು ಎಂದು ತನ್ನ ಕಾರ್ಯವನ್ನು ಸುಲಭಮಾಡಿಕೊಂಡ.ಆಯ್ತು ಸರ್ ನನಗೇನೂ ತೊಂದರೆಯಿಲ್ಲ ಎಂದು ಅಮರ್ ರಾಮಣ್ಣನ ಜೊತೆ ಜೀಪ್ ಹತ್ತಿದ.
ಅರವಿಂದ್ ಇಂಟರೋಗೇಷನ್ ಆದ ನಂತರವೇ ಇನ್ಸ್ಪೆಕ್ಟರ್ ಅಲ್ಲಿಗೆ ಹೋಗಿದ್ದರು. ಇತ್ತ ಆ ಯುವಕ ಜೋಯಲ್ ತನ್ನ ಪ್ರಾಣಕಳೆದುಕೊಂಡು ನಿಗೂಢತೆಯ ಸೃಷ್ಟಿಕರ್ತನಾಗಿದ್ದ.ಅವನ ಬಟ್ಟೆಯೆಲ್ಲ ರಕ್ತಸಿಕ್ತವಾಗಿತ್ತು.ಮೊದಲೇ ಅಲ್ಲಿ ರಾತ್ರಿಯಿಂದ ಸತ್ತ ಹೆಣವನ್ನು ಕಾಯುತ್ತಿದ್ದ ಕಾನ್ಸ್‌ಟೇಬಲ್ ಬಂದು ಇನ್ಸ್ಪೆಕ್ಟರ್ ಗೆ ಸೆಲ್ಯೂಟ್ ಹೊಡೆದರು.ಕೆಲವೊಮ್ಮೆ ಹೀಗೆ ಆಗಿಬಿಡುತ್ತೆ ಪಾಪ. ಕೊಲೆ ಮಾಡಿದವರು ಅಥವಾ ಸಂದರ್ಭಕ್ಕೆ ಹೆದರಿ ಕೊಲೆ ಮಾಡಿ ಓಡಿ ಹೋದವರು ಮತ್ತೆ ಬಂದು ಸಾಕ್ಷಿ ನಾಶಕ್ಕಾಗಿ ಜೀವಂತ ಸುಟ್ಟುಹಾಕಲು ಅಥವಾ ಹೆಣವನ್ನು ಎತ್ತಿಕೊಂಡು ಹೋಗಲು ಬರಬಹುದು ಎಂಬ ಸಂಶಯದ ಮೇರೆಗೆ ಪೋಲಿಸ್ ಅಧಿಕಾರಿಗಳು ಅಲ್ಲಿಯೇ ಇದ್ದು ಬೆಳಗಿನ ಜಾವ ತಮ್ಮ ಮೇಲಧಿಕಾರಿಗಳು ಬರುವವರೆಗೂ ಕಾಯುತ್ತ ಕೂತಿರುತ್ತಾರೆ.ಕುಟುಂಬವನ್ನು ಬಿಟ್ಟು, ಜೀವನದ ಆನಂದವನ್ನು ತ್ಯಜಿಸಿ. ಅವರು ಇಷ್ಟೆಲ್ಲಾ ಮಾಡುವುದು ಜನರ ಕಣ್ಣಿಗೆ ಕಾಣಸಿಗದಿರುವದೇ ವಿಚಿತ್ರ. ಅವರನ್ನು ಮನಬಂದಂತೆ ಬಾಯಿಗೆ ಬಂದ ಹಾಗೆ ನಿಂದಿಸಿಬಿಡುತ್ತಾರೆ ಸಮಾಜದಲ್ಲಿ ದೊಡ್ಡಜನ ಎಂದೆನಿಸಿಕೊಳ್ಳುವ ಮಹಾ ವ್ಯಕ್ತಿಗಳು.
ಇನ್ಸ್ಪೆಕ್ಟರ್ ಅವರನ್ನು ಮನೆಗೆ ಹೋಗುವಂತೆ ಸೂಚನೆ ನೀಡಿದರು.ಸ್ಥಳದ ಪರಿಶೀಲನೆ ನಡೆಸಿದರು. ಅದು ಡ್ರೀಮ್ ವರ್ಲ್ಡ್ ಅನ್ನೋ ಬಾರಿನ ಹತ್ತಿರ ಇತ್ತು.ಆದರೂ ಅಲ್ಲಿ ಜನರ ಓಡಾಟ ಕಡಿಮೆ. ರೋಡ್ ನ ಪಕ್ಕದಲ್ಲಿ ಇದ್ದ ಜಾಗವದು. ಬೆಳಗಿನ ಸಮಯದಲ್ಲಾದರೆ ಅಲ್ಲಿಯೇ ಹತ್ತಿರದ ಸ್ಲಮ್ ಹುಡುಗರು ಆಟಕ್ಕೆಂದು ಬರುತ್ತಿದ್ದರು. ರಾತ್ರಿ ವೇಳೆಯಲ್ಲಿ ಜನರು ಬೆರಳೆಣಿಕೆಯಷ್ಟು.ಜೋಯಲ್ ಹೆಣವನ್ನು ಪೋಸ್ಟ್ ಮೋರ್ಟಮ್ ಮಾಡಲೆಂದು ಕಳುಹಿಸಲಾಯಿತು. ಅವನು ಸತ್ತು ಬಿದ್ದ ಜಾಗವನ್ನು ಮಾರ್ಕ್ ಮಾಡಿರಿಸಿದರು. ಸುತ್ತ ಪೋಲಿಸ್ ದಿಗ್ಬಂಧನ ಹಾಕಲಾಯಿತು. ಕೆಲವು ಆಯ್ದ ವ್ಯಕ್ತಿಗಳನ್ನು ಮಾತ್ರ ಒಳಗೆ ಬಿಟ್ಟುಕೊಂಡರು.ಇನ್ಸ್ಪೆಕ್ಟರ್ ಯೋಚನೆಯಲ್ಲಿ ಇದ್ದರು. ಮೊಬೈಲ್ ರಿಂಗ್ ಆಗಿದ್ದು ಅವರ ಯೋಚನೆಗೆ ಅಡ್ಡಿಯಾಯಿತು. ಫೋನ್ ನಲ್ಲಿ ಮಾತನಾಡಿದ್ದವರು ರಾಮಣ್ಣ ಆಗಿದ್ದರು.ನಡೆದ ವಿಷಯವನ್ನು ಹೇಳಿದ್ದರು.ಇನ್ಸ್ಪೆಕ್ಟರ್ ಗೆ ನಿಗೂಢತೆಯ ವಾಸನೆ ಬಂದು ಬಿಟ್ಟಿತು.ಅಲ್ಲಿಯೇ ಇದ್ದ ಮತ್ತೊಬ್ಬ ಕಾನ್ಸ್ಟೇಬಲ್ ಗೆ ಜೋಯಲ್ ಮನೆಯವರು ಯಾರಾದರೂ ಇದ್ದಾರಾ ಅಂತ ತಿಳಿದುಕೊಳ್ಳಿ ಎಂದು ಸೂಚಿಸಿದರು. ನಿಗೂಢತೆ ತಲೆಯಲ್ಲಿ ಕಿರಿಕಿರಿ ಉಂಟು ಮಾಡಲು ಅನುವಾಯಿತು. ಇವುಗಳಿಗೆಲ್ಲ ಬ್ರೇಕ್ ಇರಲಿ ಎಂದು ಅಲ್ಲಿಂದ ಹೊರಟ ಇನ್ಸ್ಪೆಕ್ಟರ್ ಡ್ರೈವರ್ ಗೆ ಚಹಾ ಕುಡಿಯೋಣ ನಿಲ್ಲಿಸಿ ಎಂದರು.ಚಹಾ ಕುಡಿಯುತ್ತಾ ಆಸ್ವಾದದಲ್ಲಿ ನಿಗೂಢತೆಯನ್ನು ಕ್ಷಣಕಾಲ ಮರೆಯುವ ಯತ್ನ ನಡೆಯಿತು.